ಕೆನಡ	

ಉತ್ತರ ಅಮೆರಿಕದ ಒಂದು ಸಂಯುಕ್ತ ರಾಜ್ಯ. ಕಾಮನ್‍ವೆಲ್ತ್ ರಾಷ್ಟ್ರಸಮುದಾಯದ ಅತ್ಯಂತ ದೊಡ್ಡ ದೇಶ. ಪಶ್ಚಿಮಾರ್ಧಗೋಳದಲ್ಲೂ ಇದೇ ಅತ್ಯಂತ ವಿಸ್ತಾರವಾದ ದೇಶ. ಇಡೀ ವಿಶ್ವದಲ್ಲೆ ಇದಕ್ಕಿಂತ ದೊಡ್ಡದು ಸೋವಿಯತ್ ಸಮಾಜವಾದಿ ಗಣರಾಜ್ಯ ಒಕ್ಕೂಟ ಮಾತ್ರ. ಇದರ ದಕ್ಷಿಣದ ಎಲ್ಲೆ ಪೆಸಿಫಿಕ್ ಸಾಗರದಿಂದ ಲೇಕ್-ಆಫ್-ದಿ-ವೂಡ್ ವರೆಗೆ ಉ.ಅ.490 ಗೆ ಸಮಾಂತರದಲ್ಲಿ ಸಾಗಿ, ಪೂರ್ವದ ಕಡೆಗೆ ಇರುವ ಹಲವು ಸಣ್ಣ ಸರೋವರಗಳ ಮತ್ತು ನದಿಗಳ ಸರಪಳಿಯನ್ನು ದಾಟಿ, ಸುಪೀರಿಯರ್ ಸರೋವರದ ವಾಯವ್ಯಕ್ಕಿರುವ ಪಿಜನ್ ನದೀಮುಖವನ್ನು ಮುಟ್ಟಿ, ಮಹಾ ಸರೋವರಗಳನ್ನೂ ಅವುಗಳನ್ನು ಕೂಡಿಸುವ ನದಿಗಳನ್ನೂ ಸೋಕಿ, ಸೇಂಟ್ ಲಾರೆನ್ಸ್ ನದಿಯ ಮೇಲಿರುವ ಕಾರ್ನ್‍ವಾಲ್ ತಲುಪಿ, ಅಲ್ಲಿಂದ ಪೂರ್ವಾಭಿಮುಖವಾಗಿ ಜಾರಿ, ಉ.ಅ.450 ಯ ಮೇಲೆ ಹರಿದು ಅಂಕುಡೊಂಕಾಗಿ ಮುಂದುವರಿದು, ಫಂಡಿ ಕೊಲ್ಲಿಯಲ್ಲಿ ಕೊನೆಗೊಳ್ಳುತ್ತದೆ. ಕೆನಡದ ಪಶ್ಚಿಮಕ್ಕೆ ಪೆಸಿಫಿಕ್ ಸಾಗರ ಮತ್ತು ಅಲಾಸ್ಕ, ಪೂರ್ವಕ್ಕೆ ಅಟ್ಲಾಂಟಿಕ್ ಸಾಗರ, ಡೇವಿಸ್ ಜನಸಂಧಿ, ಬ್ಯಾಫಿನ್ ಕೊಲ್ಲಿ, ಎಲ್ಸ್‍ಮಿಯರ್ ದ್ವೀಪಕ್ಕೂ ಗ್ರೀನ್‍ಲೆಂಡಿಗೂ ನಡುವಣ ಸಮುದ್ರ, ಉತ್ತರದಲ್ಲಿ ಆಕ್ರ್ಟಿಕ್ ಸಾಗರ ಇವೆ. ಕೆನಡದ ಉತ್ತರತÀಮ ಬಿಂದು ಕೊಲಂಬಿಯ ಭೂಶಿರ (ಉ.ಅ.83 0 06'); ದಕ್ಷಿಣತಮ ಬಿಂದು ಈರೀ ಸರೋವರದ ಮಿಡ್ಲ್ ದ್ವೀಪದಲ್ಲಿದೆ (ಉ.ಅ.410 41') . ಪೂರ್ವ-ಪಶ್ಚಿಮವಾಗಿ ಇದು ಸ್ಪಿಯರ್ ಭೂಶಿರದಿಂದ (ಪ.ರೇ.520 37') ಅಲಾಸ್ಕದ ಮೇರೆಯ (ಪ.ರೇ.1410 ) ವರೆಗೆ ಹಬ್ಬಿದೆ. ಆಡಳಿತ ದೃಷ್ಟಿಯಿಂಡ ಹತ್ತು ಪ್ರಾಂತ್ಯಗಳಾಗಿ ಮತ್ತು ಎರಡು ಪ್ರದೇಶಗಳಾಗಿ ವಿಂಗಡವಾಗಿರುವ ಕೆನಡದ ವಿಸ್ತೀರ್ಣ 38,51,809 ಚ.ಮೈ. ಜನಸಂಖ್ಯೆ 2,00,14,880(1966).  ರಾಜಧಾನಿ ಆಟ್ಟವ.

ಭೂರಚನೆ: ವಿಶ್ವದ ಕೆಲವು ಅತ್ಯಂತ ಪುರಾತನ ಶಿಲೆಗಳು ಕೆನಡದಲ್ಲಿವೆ. ಹಡ್ಸನ್ ಕೊಲ್ಲಿಯ ಅವನತ ಪ್ರದೇಶದ ಸುತ್ತ ಇರುವ ನೆಲದ ಹೊದಿಕೆಯ ತಳದಲ್ಲಿ, ಬಲು ಹತ್ತಿರದಲ್ಲೇ, 16,00,000 ಚ.ಮೈ. ವಿಸ್ತಾರದಲ್ಲಿ, ಅವು ಸಿಗುತ್ತವೆ. ಈ ಪ್ರದೇಶವೇ ಕೆನಡಿಯನ್ ಫಲಕ (ಷೀಲ್ಡ್: ಸ್ಥಿರ ಭೂಪ್ರದೇಶ). ಇಲ್ಲಿ ಪೂರ್ವ ಕೇಂಬ್ರಿಯನ್ ಕಲ್ಪದ (600 ದ.ಲ.ವರ್ಷಗಳಿಗಿಂತಲೂ ಪ್ರಾಚೀನ ಕಾಲ) ಗ್ರಾನೈಟ್, ನೈಸ್ (ಗೀರುಶಿಲೆ), ಷಿಸ್ಟ್ (ಪದರಶಿಲೆ), ಕ್ವಾಟ್ರ್ಸೈಟ್ (ಬೆಣಚುಶಿಲೆ)-ಮುಂತಾದ ಕಣಶಿಲೆಗಳನ್ನು ಕಾಣಬಹುದು. ಚಿನ್ನ, ಬೆಳ್ಳಿ, ಪ್ಲಾಟಿನಂ, ತಾಮ್ರ, ನಿಕ್ಕಲ್, ಕೊಬಾಲ್ಟ್, ಕಬ್ಬಿಣ, ಸೀಸ ಮತ್ತು ಸತುಗಳು ನಿಕ್ಷೇಪಗಳು ಈ ಬಂಡೆಗಳಲ್ಲಿವೆ. ಗಣಿ ಉದ್ಯಮ ಪ್ರಧಾನವಾದ ರಾಷ್ಟ್ರಗಳಲ್ಲಿ ಕೆನಡವೂ ಒಂದು.

ಕೆನೆಡಿಯನ್ ಫಲಕದಲ್ಲಿ ಒಮ್ಮೆ ಬೃಹತ್ ಪರ್ವತ ಪಂಕ್ತಿಗಳಿದ್ದುವೆಂಬುದು ಇಲ್ಲಿಯ ಶಿಲಾರಚನೆಯಿಂದ ವೇದ್ಯವಾಗುತ್ತದೆ. ಆದರೆ ಪೂರ್ವ ಕೇಂಬ್ರಿಯನ್ ಕಲ್ಪದ ಅಂತ್ಯದ ವೇಳೆಗೆ ಈ ಭಾಗವೆಲ್ಲ ಸವೆದು ತಗ್ಗಾಗಿ ಪರಿಣಮಿಸಿತು. ಅನಂತರ ಸಮುದ್ರದ ನೀರು ಇದರೊಳಕ್ಕೆ ನುಗ್ಗಿತು. ಸ್ವಲ್ಪಕಾಲದ ಮೇಲೆ ಈಶಾನ್ಯ ಭಾಗ ಸ್ವಲ್ಪ ಮೇಲಕ್ಕೆದ್ದಿರಬೇಕು. ಉತ್ತರ ಲ್ಯಾಬ್ರಡಾರ್, ಬ್ಯಾಫಿನ್ ದ್ವೀಪ ಇವು ಸಮುದ್ರಮಟ್ಟದಿಂದ 5,000'ಗಿಂತ ಎತ್ತರದಲ್ಲಿವೆ

ಪುರಾತನ ಭೂಭಾಗದ ಸವೆತದಿಂದುಂಟಾದ ಶಿಲಾಸಾಮಗ್ರಿಗಳು ಸುತ್ತಮುತ್ತಲ ಇಳುಕಲುಗಳಲ್ಲಿ ಶೇಖರಗೊಂಡು, ಪೇಲಿಯೋಜೋóಯಿಕ್ ಯುಗದಲ್ಲಿ ಮರಳುಶಿಲೆ, ಸುಣ್ಣಶಿಲೆ ಮತ್ತು ಜೇಡುಶಿಲಾಸ್ತೋಮಗಳಾಗಿ ಮಾರ್ಪಟ್ಟುವು. ಇವುಗಳಲ್ಲಿ ಉತ್ತಮ ಸ್ತರರಚನೆಯನ್ನು ಕಾಣಬಹುದು. ಖಂಡದ ಮಧ್ಯಭಾಗದಲ್ಲಿ ಈ ಜಲಜ ಶಿಲಾಸ್ತರಗಳು ಫಲಕದ ಗಡುಸಾದ ಶಿಲಾರಾಶಿಯ ಮೇಲೆ ನಿಂತಿವೆ. ಅನಂತರ ತಲೆದೋರಿದ ಭೂ ಚಟುವಟಿಕೆಗಳ ಪ್ರಭಾವಕ್ಕೆ ಇವು ಅಷ್ಟಾಗಿ ಒಳಗಾಗಿದ್ದಂತೆ ಕಂಡುಬರುವುದಿಲ್ಲ. ಆದರೆ ಖಂಡದ ಆಗ್ನೇಯ ಅಂಚಿನ ಶಿಲಾಸ್ತರಗಳು ಮಡಿಕೆಬಿದ್ದು ಆಪಲ್ಯಾಷಿಯನ್ ಪರ್ವತಗಳಾಗಿವೆ. ಪಶ್ಚಿಮ ಮತ್ತು ನೈಋತ್ಯ ಭಾಗಗಳಲ್ಲಿ ಪೇಲಿಯೋಜೋóಯಿಕ್ ಯುಗದ (600 ದ.ಲ.ವ. ಪ್ರಾಚೀನದಿಂದ 225 ದ.ಲ.ವ. ಪ್ರಾಚೀನದ ವರೆಗಿನ ಅವಧಿ) ವಿಸ್ತಾರವಾದ ಶಿಲಾಸ್ತರಗಳ ಮೇಲೆ ಮಿಸೋಜೋóಯಿಕ್ ಯುಗದ (225 ದ.ಲ.ವ. ಪ್ರಾಚೀನದಿಂದ 65 ದ.ಲ.ವ. ಪ್ರಾಚೀನದ ವರೆಗಿನ ಅವಧಿ) ಜಲಜಶಿಲೆಗಳು ಹರಡಿಕೊಂಡುವು. ಈ ಎರಡೂ ಯುಗಗಳ ಶಿಲಾಸ್ತೋಮಗಳಲ್ಲಿ ಕಲ್ಲಿದ್ದಲು, ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಜಿಪ್ಸಂ, ಲವಣ, ಪೊಟ್ಯಾಷ್ ಮುಂತಾದ ಉಪಯುಕ್ರ ಖನಿಜನಿಕ್ಷೇಪಗಳಿವೆ.

ಮೀಸೋಜೋóಯಿಕ್ ಯುಗದ ಕೊನೆಯಲ್ಲಿ ಖಂಡದ ಪಶ್ಚಿಮದ ಅಂಚಿನ ಉದ್ದಕ್ಕೂ ಭೂಮಿಯ ಹೊರಪದರ ಅಸ್ಥಿರವಾಗಿತ್ತು. ಮಂದವಾದ ಶಿಲಾಪ್ರಸ್ತರಗಳು ಅತೀವ ಒತ್ತಡದಿಂದಾಗಿ ಮಡಿಕೆ ಬಿದ್ದುದೇ ಅಲ್ಲದೆ, ಸ್ತರಭಂಗಗಳಿಗೂ ಒಳಗಾಗಿ ಮೇಲಕ್ಕೆದ್ದುವು. ಕಾರ್ಡಿಲೆರಾನ್ ಪರ್ವತಸ್ತೋಮ ಸಂಭವಿಸಿದ್ದು ಹೀಗೆ. ಆಲ್ಬರ್ಟನ್ ಅಡಿಬೆಟ್ಟಗಳಿಂದ ಫೆಸಿಫಿಕಿನ ವರೆಗೆ 500 ಮೈ. ಅಗಲ ಇರುವ ಈ ಪ್ರದೇಶದಲ್ಲಿ ರಾಕಿಯ ಉನ್ನತ ಶಿಖರಗಳೂ ಕೊಲಂಬಿಯ ಪರ್ವತಗಳೂ ಕೋಸ್ಟ್ ಪರ್ವತಗಳೂ ವ್ಯಾಂಕೂವರ್ ದ್ವೀಪದ ಪರ್ವತಗಳೂ ಸೇರಿವೆ. ಮೀಸೊಜೋóಯಿಕ್ ಯುಗದ ಸ್ವಲ್ಪ ಮುಂಚಿನ ಕಾಲದಲ್ಲಿ ಕೆನೆಡಿಯನ್ ಫಲಕದ ಈಶಾನ್ಯ ತುದಿಯ ಉದ್ದಕ್ಕೂ ಭೂಮಿಯ ಹೊರಪದರದಲ್ಲಿ ಅಸ್ಥಿರತೆ ಉಂಟಾಗಿತ್ತು. ಉತ್ತರ ಆರ್ಕ್‍ಟಿಕ್ ದ್ವೀಪಗಳ ಇನ್ಯೂಷಿಯನ್ ಪರ್ವತಶ್ರೇಣಿಗಳು ಸಂಭವಿಸಿದ್ದು ಇದರಿಂದಾಗಿ.

ಪಶ್ಚಿಮ ಕೆನಡದ ಕೆಲವು ಭಾಗಗಳಲ್ಲಿ, ಮುಖ್ಯವಾಗಿ ದಕ್ಷಿಣ ಆಲ್ಬರ್ಟದಲ್ಲಿ, ಪುರಾತನ ರಾಕಿ ಪರ್ವತಶ್ರೇಣಿಗಳ ಸವೆತದಿಂದುಂಟಾಗಿರುವ ಟರ್ಷಿಯರಿ (65 ದ.ಲ.ವ. ಪ್ರಾಚೀನದಿಂದ 1 ದ.ಲ.ವ. ಪ್ರಾಚೀನದ ವರೆಗಿನ ಅವಧಿ) ಶಿಲಾಸ್ತೋಮಗಳಿವೆ. ಇವು ಸಹ ಭೂಸವೆತಕ್ಕೊಳಗಾದ್ದಕ್ಕೆ ದಾಖಲೆಗಳಿವೆ. ಈ ಭೂಯುಗದ ನುರುಜು ಶಿಲಾಸ್ತರದ ಅಲ್ಪಸ್ವಲ್ಪ ಭಾಗವನ್ನು ಸೈಪ್ರೆಸ್ ಬೆಟ್ಟಗಳ ಮೇಲೂ ರಾಕಿ ಶ್ರೇಣಿಯ ತಪ್ಪಲು ಬೆಟ್ಟಗಳಲ್ಲೂ ಅಲ್ಲಲ್ಲೆ ನೋಡಬಹುದು. ಇಡೀ ಉತ್ತರ ಅಮೆರಿಕದ ಬಹುಮಟ್ಟಿನ ಮೇಲ್ಮೈಲಕ್ಷಣ ಮತ್ತು ಸ್ಥಿರತೆಗೆ ಕಾರಣಭೂತವಾದ ಮತ್ತು ಕಣಶಿಲೆಗಳಿಂದಾದ ಪುರಾತನ ಕೆನೆಡಿಯನ್ ಫಲಕವನ್ನು ಕೆನಡದ ಕೆಲವೆಡೆ ಕಿರಿಯ ಪ್ರಸ್ತರಿಶೀಲೆಗಳು ಸುಮಾರು 10,000 ಅಡಿಗಳಷ್ಟು ಮಂದವಾಗಿ ಆವರಿಸಿಕೊಂಡಿವೆ.

ಪ್ಲೀಸ್ಟೊಸೀನ್ ಕಲ್ಪದಲ್ಲಿ (1 ದ.ಲ.ವ. ಪ್ರಾಚೀನದಿಂದ ಇಂದಿನ ವರೆಗಿನ ಅವಧಿ) ಕೆನಡದ ಬಹುಭಾಗ ಹಿಮನದಿಗಳಿಂದ ಆವೃತವಾಗಿತ್ತು. ಇವುಗಳ ಕಾರ್ಯಾಚರಣೆಯಿಂದಾಗಿ ಇದರ ಮೇಲ್ಮೈಯ ನಿಕ್ಷೇಪಗಳು ಮುರುಕಲು ಗುಪ್ಪೆಗಳು, ಟಿಲ್, ಹರಿಯುವ ನೀರಿನಿಂದ ವಿಂಗಡವಾದ ನುರುಜು, ಮರಳು, ಗೋದು ಅಥವಾ ಜೇಡಿಮಣ್ಣಿನಿಂದ ಕೂಡಿವೆ. ಪುರಾತನ ನದೀಪಾತ್ರಗಳಾಗಿದ್ದೆಡೆಯಲ್ಲಿ ದಪ್ಪ ಕಣಗಳ ನಿಕ್ಷೇಪಗಳೂ ಹಿಮನದೀಯ ಸರೋವರಗಳ ತಳದಲ್ಲಿ ಸೂಕ್ಷ್ಮಕಣಗಳ ನಿಕ್ಷೇಪಗಳೂ ಸೇರಿದುವೆಂದು ಕಂಡುಬರುತ್ತದೆ. ಪೂರ್ವ ಮತ್ತು ಪಶ್ಚಿಮ ಕೆನಡದಲ್ಲಿ ಕೃಷಿಗೆ ಅತ್ಯಂತ ಪ್ರಶಸ್ತವೆನಿಸಿದ ಪ್ರದೇಶಗಳು ಹಿಂದೆ ಅಗಾಸಿಸ್ ಮತ್ತು ಇತರ ಪುರಾತನ ಸರೋವರಗಳ ತಳಭಾಗಗಳಾಗಿದ್ದುವು.

ಮೇಲ್ಮೈ ಲಕ್ಷಣ: ಭೂಮಿಯ ಮೇಲ್ಮೈ ಏರುತಗ್ಗುಗಳಿಂದ ಕೂಡಿದ ಬೋಗುಣಿಯಂತಿದೆ. ಇದರ ಅತ್ಯಂತ ತಗ್ಗಿನ ಜಾಗದಲ್ಲಿ ಹಡ್ಸನ್ ಕೊಲ್ಲಿ ಇದೆ. ಈ ಅವನತ ಪ್ರದೇಶದ ಸುತ್ತಲೂ ಬಹುತೇಕ ಇರುವವು ಕೆನೆಡಿಯನ್ ಫಲಕದ ಪುರಾತನ ಗಟ್ಟಿಶಿಲೆಗಳು. ಅಲ್ಲಲ್ಲಿ ಒರಟಾದ ಬಂಡೆಗಳು ಮೇಲೆದ್ದಿವೆ. ಆದರೆ ಇವು ಎತ್ತರವಾಗಿಲ್ಲ. ಕೆನಡಿಯನ್ ಫಲಕದ ದಕ್ಷಿಣಕ್ಕೂ ಪಶ್ಚಿಮಕ್ಕೂ ಸಮತಲ ಬಂಡೆಗಳ ಹಾಸಿನ ಮೇಲೆ ವಿಶಾಲ ಬಯಲುಗಳು ಹಬ್ಬಿವೆ. ಸೇಂಟ್ ಲಾರೆನ್ಸ್ ಮತ್ತು ಕೆಳಗಿನ ಮಹಾಸರೋವರಗಳ ಬಳಿಯ ಮತ್ತು ದಕ್ಷಿಣ ಮ್ಯಾನಿಟೋಬದ ಮೈದಾನಗಳು ಸಮುದ್ರಮಟ್ಟದಿಂದ ಸಾಮಾನ್ಯವಾಗಿ 1,000'ಗಿಂತ ಎತ್ತರವಾಗಿಲ್ಲ ಸ್ಯಾಸ್ಕ್ಯಾಚೆವನ್‍ನ ಮಹಾ ಮೈದಾನಗಳು ಮತ್ತು ಆಲ್ಬರ್ಟ ಇವು ಸಮುದ್ರಮಟ್ಟದಿಂದ 2,000'-3,500' ಎತ್ತರವಾಗಿವೆ. ಇಲ್ಲಿಯ ವಿಶಾಲ ಪ್ರದೇಶಗಳಲ್ಲಿ ಸ್ಯಾಸ್ಕ್ಯಾಚೆವನ್ ನದೀಕಣಿವೆಗಳನ್ನು ಬಿಟ್ಟರೆ ಬೇರೆಲ್ಲೂ ಏರುತಗ್ಗುಗಳಿಲ್ಲ. ಸೈಪ್ರೆಸ್ ಬೆಟ್ಟಗಳು, ವುಡ್ ಪರ್ವತಗಳು ಮುಂತಾದವು ತಕ್ಕಮಟ್ಟಿಗೆ ಕಡಿದಾಗಿವೆ.

ಕೆನೆಡಿಯನ್ ಕೊಳ್ಳದ ಪಶ್ಚಿಮದ ಏಣಿನ ಪ್ರದೇಶ ಅತ್ಯುನ್ನತವಾದ್ದು. ಇಲ್ಲಿಯ ಕಿರಿಯ ಕಾರ್ಡಿಲ್ಯೇರ ಪರ್ವತ ಪಂಕ್ತಿಯಲ್ಲಿ 10,000'-20,000' ಎತ್ತರದ ಹಲವಾರು ಶಿಖರಗಳಿವೆ. ಕೆನಡದ ಪೂರ್ವದ ಅಂಚಿನ ಪ್ರದೇಶವೂ ಪರ್ವತಮಯ. ಆದರೆ ಅಲ್ಲಿಯ ಪರ್ವತಗಳು ಹೆಚ್ಚು ಹಳೆಯವು ಮತ್ತು ಸವೆತಕ್ಕೊಳಗಾದಂಥವು. ಆದ್ದರಿಂದ ಅವು ಪಶ್ಚಿಮದ ಪರ್ವತಗಳಷ್ಟು ಉನ್ನತವಾಗಿಲ್ಲ. ಆದರೂ ಅಗ್ನೇಯ ಕ್ವಿಬೆಕ್‍ನ ಕೆಲವು ಶಿಖರಗಳ ಎತ್ತರ ಸುಮಾರು 4,000'; ಲ್ಯಾಬ್ರಡಾರಿನ ಟೋರ್ನ್‍ಗಾಟ್ ಪರ್ವತಗಳ ಎತ್ತರ 4,500'-5,000'. ಈಶಾನ್ಯದ ಅಂಚುಪ್ರದೇಶ ಇನ್ನೂ ಎತ್ತರವಾಗಿದೆ. ಇಲ್ಲಿಯ ಎಲ್ಸ್‍ಮೀರ್ ದ್ವೀಪದ ಪರ್ವತಶ್ರೇಣಿಯ ಹಲವಾರು ಶಿಖರಗಳು 9,600' ವರೆಗೆ ಎತ್ತರವಾಗಿವೆ.
ಕೆನಡವನ್ನು ಭೌಗೋಳಿಕವಾಗಿ 1 ಕೆನಡಿಯನ್ ಫಲಕ 2 ಆಕೇಡಿಯ ಪ್ರದೇಶ 3 ಸೇಂಟ್ ಲಾರೆನ್ಸ್ 4 ಹುಲ್ಲುಗಾವಲು ಮತ್ತು 5 ಕಾರ್ಡಿಲ್ಯೇರ ಪ್ರದೇಶ ಎಂದು ಐದು ಭಾಗಗಳಾಗಿ ವಿಂಗಡಿಸಬಹುದು.

1 ಕೆನಡಿಯನ್ ಫಲಕ: ಇದರ ವಿಸ್ತೀರ್ಣ 17,71,000 ಚ.ಮೈ. ಇದರಲ್ಲಿ ಲ್ಯಾಬ್ರಡಾರ್, ಕ್ವಿಬೆಕ್ ಪ್ರಾಂತ್ಯದ ಬಹುಭಾಗ, ಉತ್ತರ ಆಂಟೇರಿಯೋ ಮತ್ತು ಆರ್ಕ್‍ಟಿಕ್ ಪ್ರದೇಶ-ಇವು ಸೇರಿವೆ. ಇದರ ಪಶ್ಚಿಮದ ಗಡಿ ಲೇಕ್-ಆಫ್-ದಿ-ವುಡ್ ನಿಂದ ವಾಯುವ್ಯಕ್ಕೆ ಮೆಕೆನ್‍ಜಿó ನದಿ ಆರ್ಕ್‍ಟಿಕ್ ಸಾಗರವನ್ನು ಸೇರುವ ಸ್ಥಳದ ವರೆಗೆ ಹಬ್ಬಿದೆ. ಆರ್ಕ್‍ಟಿಕ್ ಸಾಗರದ ದ್ವೀಪಗಳ ದಕ್ಷಿಣ ಭಾಗಗಳು ಸೇರಿರುವುದೂ ಈ ಪ್ರದೇಶಕ್ಕೇ. ನಡುವೆ ಹಡ್ಸನ್ ಕೊಲ್ಲಿಯಿಂದ ಕೂಡಿ ಅರ್ಧಚಂದ್ರಾಕೃತಿಯಲ್ಲಿರುವ ಈ ಪ್ರದೇಶದಲ್ಲಿ ಖನಿಜನಿಕ್ಷೇಪಗಳು ಹೇರಳವಾಗಿವೆ. ನಿಕ್ಕಲ್, ತಾಮ್ರ ಮತು ಚಿನ್ನ ಮುಖ್ಯವಾದವು. ಈ ಭಾಗದಲ್ಲಿ ಲ್ಯಾಬ್ರಡಾರಿನ ನಚ್ವಾಕ್ ಪರ್ವತ ಶ್ರೇಣಿಯ ಶಿಖರಗಳು 5,500' ಎತ್ತರಕ್ಕೇರಿವೆ. ಇತರ ಕಡೆಗಳಲ್ಲಿ ಕಿರುಬೆಟ್ಟಗಳು ಮತ್ತು ಗಟ್ಟಿಬಂಡೆಗಳ ಸಾಲುಗಳು ಮಾತ್ರ ಉಂಟು. ಭೂಸ್ತರಗಳು ಮೃದುವಾಗಿರುವ ಕಡೆ ಕಣಿವೆಗಳು ಹೆಚ್ಚು. ಅವುಗಳ ಮಧ್ಯೆ ಸರೋವರಗಳಿವೆ. ಕೆನಡಿಯನ್ ಫಲಕದ ಅರ್ಧ ಭಾಗದ ಎತ್ತರ ಸಮುದ್ರ ಮಟ್ಟಕ್ಕೆ 1,000'ಗಿಂತ ಕಡಿಮೆ. ಹಡ್ಸನ್ ಕೊಲ್ಲಿಯ ಸುತ್ತ 100-500 ಮೈ.ಗಳಷ್ಟು ದೂರ ವ್ಯಾಪಿಸಿ, ನೈಋತ್ಯಕ್ಕೆ ವಿನಿಪೆಗ್ ಸರೋವರದ ಆದಿಯುಗದ ಶಿಲೆಗಳ ಅಂಚಿನ ವರೆಗೆ ಭೂಮಿ ಇಳುಕಲಾಗಿದೆ. ಈ ಪ್ರದೇಶದ ಉತ್ತರಕ್ಕೆ ಹೋದಂತೆಲ್ಲ ಮರಗಳು ಹೆಚ್ಚು ಹೆಚ್ಚು ಗಿಡ್ಡಾಗಿರುವುದನ್ನು ಕಾಣಬಹುದು. ಅದಕ್ಕೂ ಮುಂದೆ ಬಂಜರು ಪ್ರದೇಶ. ಋತುಗಳಿಗೆ ತಕ್ಕಂತೆ ಹಿಮಸಾರಂಗ ಮತ್ತು ಕಸ್ತೂರಿ ವೃಷಭಗಳು ಉತ್ತರ-ದಕ್ಷಿಣಗಳ ನಡುವೆ ಸಂಚರಿಸುತ್ತವೆ. ಹಡ್ಸನ್ ಕೊಲ್ಲಿಯ ಉತ್ತರಕ್ಕಿರುವ ಕೆಲವು ವಿಶಾಲ ದ್ವೀಪಗಳಲ್ಲಿ ಅಲ್ಲಲ್ಲಿ ನೀರ್ಗಲ್ಲ ನದಿಗಳಿವೆ. ಅದು ಅತ್ಯಂತ ಶೀತಪ್ರದೇಶ. ಇಂಡಿಯನರೂ ಎಸ್ಕಿಮೋಗಳೂ ಬೇಸಗೆಯಲ್ಲಿ ಮಾತ್ರ ಅಲ್ಲಿಗೆ ಹಿಮಸಾರಂಗಗಳ ಬೇಟೆಗಾಗಿ ಬರುತ್ತಾರೆ.

2 ಆಕೇಡಿಯ ಪ್ರದೇಶ: ಕೆನಡಕ್ಕೆ ಮೊದಮೊದಲು ಬಂದ ಫ್ರೆಂಚ್ ವಲಸಿಗರು ನೋವ ಸ್ಕೋಷ ಭಾಗವನ್ನು ಅಕೇಡಿಯ ಎಂದು ಕರೆದರು. ಈ ಪ್ರದೇಶಕ್ಕೆ ಈಗ ನೋವ ಸ್ಕೋಷ, ನ್ಯೂ ಬ್ರನ್ಸ್‍ವಿಕ್ ಮತ್ತು ಪ್ರಿನ್ಸ್ ಎಡ್ವರ್ಡ್ ದ್ವೀಪ. ಕ್ವಿಬೆಕ್ ಪ್ರಾಂತ್ಯದ ಆಗ್ನೇಯ ಭಾಗ ಮತ್ತು ನ್ಯೂ ಫೌಂಡ್ಲಂಡ್ ಸೇರುತ್ತವೆ. ನ್ಯೂಬ್ರನ್‍ಸ್óವಿಕ್ ಪ್ರಾಂತ್ಯದ ಪರ್ವತಗಳು ಕಲ್ಲಿದ್ದಲ ಸ್ತರಗಳಿಂದ ಕೂಡಿವೆ. ಈ ಪ್ರಾಂತ್ಯಕ್ಕೆ ಕಡಿದಾದ ಭೂಕಂಠದಿಂದ ಸಂಪರ್ಕ ಹೊಂದಿರುವ ನೋವ ಸ್ಕೋಷ ಪರ್ಯಾಯ ದ್ವೀಪ ಸುತ್ತಲೂ ಕೊಲ್ಲಿಗಳಿಂದಲೂ ರೇವುಗಳಿಂದಲೂ ಕೂಡಿದೆ. ಅಲ್ಲಿ ಬ್ರಿಟನ್ ಭೂಶಿರವೇ ಮೊದಲಾದ ಕಡೆಗಳಲ್ಲಿ ಕಲ್ಲಿದ್ದಲೂ ಪ್ಲಾಸ್ಟರ್ ಆಫ್ ಪ್ಯಾರಿಸ್ ತಯಾರಿಕೆಗೆ ಬಳಸುವ ಜಿಪ್ಸಮ್ ಖನಿಜವು ಸಿಗುತ್ತವೆ. ಕ್ವಿಬೆಕ್ ಭಾಗದಲ್ಲಿ ಕಲ್ನಾರು ದೊರಕುತ್ತದೆ. ಕೆನಡದ ಅತ್ಯಂತ ಕಿರಿ ಪ್ರಾಂತ್ಯವಾದ ಪ್ರಿನ್ಸ್ ಎಡ್ವರ್ಡ್ ದ್ವೀಪ ಕೆಂಪು ಭೂಮಿಯಿಂದ ಕೂಡಿದ್ದು.

3 ಸೇಂಟ್ ಲಾರೆನ್ಸ್ಸ್ ನದೀಬಯಲು: ಮೊಟ್ಟಮೊದಲ ವಲಸಿಗರು ಸೇಂಟ್ ಲಾರೆನ್ಸ್ ನದಿಯ ಮುಖಭಾಗದಿಂದ ಆಗಮಿಸಿದ ಕಾರಣ, ಈ ನದಿಯ ಭಾಗಗಳಲ್ಲಿ ನಗರಗಳು ಜನಭರಿತವಾಗಿರುವುವಲ್ಲದೆ ಶ್ರೀಮಂತರನೇಕರು ಈ ನದಿಯ ತೀರಗಳಲ್ಲಿ ನೆಲಸಿದ್ದಾರೆ. ಅವರಿಗೆ ಅನುಕೂಲವಾಗಿ ಕ್ವಿಬೆಕ್ ನಗರದಿಂದ ಹ್ಯೂರನ್ ಸರೋವರದ ವರೆಗೆ 600 ಚ.ಮೈ.ಗಳಷ್ಟು ನೆಲ ಫಲವತ್ತಾದ್ದು. ಹಿಂದೆ ಬೆಟ್ಟಗುಡ್ಡಗಳ ಮತ್ತು ಅರಣ್ಯಗಳ ದೆಸೆಯಿಂದ ಪ್ರತ್ಯೇಕವಾಗಿದ್ದ ಭಾಗಗಳು ಗಣಿಗಳ ಅಭಿವೃದ್ಧಿಯಿಂದಲೂ ವಲಸೆಗಾರರ ನೆಲೆಗಳಿಂದಲೂ ಪರಸ್ಪರ ಸಂಪರ್ಕ ಪಡೆದಿವೆ. ಕೆನಡದ ಅತ್ಯಂತ ದೊಡ್ಡ ಪಟ್ಟಣ ಮಾಂಟ್ರಿಯಾಲ್. ಕೈಗಾರಿಕೆಯ ಕೇಂದ್ರ ಟರಾಂಟೋ, ಕೆನಡದ ರಾಜಧಾನಿ ಆಟ್ಟವ ಇವು ಈ ಪ್ರದೇಶಕ್ಕೆ ಸೇರಿದವು.
4 ಹುಲ್ಲುಗಾವಲು: ಒಳನಾಡ ಹುಲ್ಲುಗಾವಲುಪ್ರದೇಶ ಕೆನಡಿಯನ್ ಫಲಕದ ಅಂಚಿನಿಂದ ವಾಯವ್ಯಕ್ಕೆ ರಾಕಿ ಪರ್ವತಗಳವರೆಗೆ ಹಬ್ಬಿದೆ. ಇದಕ್ಕೆ ಮ್ಯಾನಿಟೋಬದ ದಕ್ಷಿಣ ಭಾಗಗಳು ಸ್ಯಾಸ್ಕ್ಯಾಚೆವನ್ ಪ್ರಾಂತ್ಯ ಮತ್ತು ಆಲ್ಬರ್ಟ ಪ್ರಾಂತ್ಯದ ಬಹುಭಾಗಗಳು ಸೇರಿವೆ. ಇದು ಗೋಧಿ ಬೆಳೆಗೆ ಪ್ರಸಿದ್ಧವಾದ್ದು. ಈ ಪ್ರದೇಶ ರಾಕಿ ಪರ್ವತವನ್ನು ಮುಟ್ಟುವ ಕಡೆ ಗ್ಯಾಸೊಲಿನ್ ಎಣ್ಣೆ ಸಿಗುತ್ತದೆ. ಹಿಂದೆ ಅಭಾವಪ್ರದೇಶವೆಂದು ಪರಿಗಣಿತವಾಗಿದ್ದ ಈ ಪ್ರದೇಶ ಎರಡನೆಯ ಮಹಾಯುದ್ಧದ ತರುವಾಯ ಗ್ಯಾಸೊಲಿನ್ ಎಣ್ಣೆಯ ಗಣಿಗಳಿಂದಲೂ ಖನಿಜದ ಗಣಿಗಳಿಂದಲೂ ಉತ್ತಮ ಕೃಷಿಯಿಂದಲೂ ಅಭಿವೃದ್ಧಿ ಹೊಂದಿ ಕೆನಡದ ಪೂರ್ವ ಭಾಗಗಳಷ್ಟೇ ಪ್ರಗತಿ ಹೊಂದಿದೆ.
5 ಕಾರ್ಡಿಲ್ಯೇರ ಪ್ರದೇಶ: ಪಶ್ಚಿಮದ ಇಡೀ ರಾಕಿ ಪರ್ವತಗಳ ಪ್ರದೇಶ ಕಾರ್ಡಿಲ್ಯೇರ. ಈ ಪರ್ವತಗಳಿಗೆ ಸಮಾಂತರವಾಗಿ ವಿವಿಧ ಯುಗಗಳ ಶಿಲಾಸ್ತರಗಳಿಂದ ಕೂಡಿದ ಪರ್ವತ ಶ್ರೇಣಿಗಳು ಸಹ ಸೇರಿವೆ. ರಾಕಿ ಪರ್ವತಗಳ ಕಡೆಯ ಅನೇಕ ನದೀ ಕಣಿವೆಗಳ ಫಲವತ್ತಾದ ಭೂಮಿ ಬ್ರಿಟಿಷ್ ಕೊಲಂಬಿಯಕ್ಕೆ ಸೇರಿದೆ. ಈ ಕಣಿವೆಗಳು ವಾಯವ್ಯಕ್ಕೆ 500 ಮೈ. ದೂರ ಹರಡಿವೆ. ಇವುಗಳ ಅಗಲ 100 ಮೈ. ಇವುಗಳ ಮಧ್ಯೆ ಅನೇಕ ನದಿಗಳು ಹರಿಯುತ್ತವೆ.

ಇಲ್ಲಿಯ ಪರ್ವತಗಳಲ್ಲಿ ಮುಖ್ಯವಾದವು ಲೋಗನ್ (19,850'), ಸೇಂಟ್ ಇಲೈಯಸ್ (18,008'), ಆಲ್ಬರ್ಟ ಪ್ರಾಂತ್ಯದ ರಾಬ್‍ಸನ್ (12,972') ಮತ್ತು ಸೆಲ್ಕರ್ಕ್ (11,000'). ದಕ್ಷಿಣ ಭಾಗದ ಪರ್ವತಗಳಲ್ಲಿ ಸಮುದ್ರಮಟ್ಟಕ್ಕೆ 7,500' ಎತ್ತರದಲ್ಲಿ ಮಂಜು ಕವಿಯುತ್ತದೆ. ಸೆಲ್ಕರ್ಕ್ ಮತ್ತು ರಾಕಿ ಪರ್ವತಗಳಲ್ಲಿ ನೀರ್ಗಲ್ಲಿನ ಅನೇಕ ದೊಡ್ಡ ನದಿಗಳುಂಟು. ಅವುಗಳ ಮಂಜುಗಟ್ಟುನೆಲ 100 ಚ.ಮೈ. ಗಳಷ್ಟು ವ್ಯಾಪಕವಾಗಿದೆ. ಬ್ರಿಟಿಷ್ ಕೊಲಂಬಿಯ ಭಾಗದಲ್ಲಿ 7,500' ಎತ್ತರದಲ್ಲಿ ಮರಗಳು ಯಥೇಚ್ಛ.
ನದಿಗಳು ಮತ್ತು ಸರೋವರಗಳು: ಕೆನಡದ ಅನೇಕ ಭಾಗಗಳಲ್ಲಿ ನೂರಾರು ಮೈ. ಉದ್ದವುಳ್ಳ ಸಾವಿರಾರು ಅಡಿಗಳಷ್ಟು ಆಳವಾದ ಮಹಾ ಸರೋವರಗಳಿಂದ ಹಿಡಿದು, ದಟ್ಟಡವಿಗಳಲ್ಲಿ ಕಾಣದಂತಿರುವ ಹೊಂಡಗಳವರೆಗೆ ವಿವಿಧ ಗಾತ್ರಗಳ ಜಲಾಶಯಗಳಿವೆ. ವಿಶಾಲವಾದ ಹಾಗೂ ಒತ್ತಾಗಿ ಹರಡಿ ಕೊಂಡಿರುವ ಸರೋವರಗಳು ಹಡ್ಸನ್ ಕೊಲ್ಲಿಗೆ 500 ಮೈಲಿಗಳಿಂದ ಹಿಡಿದು 1,000 ಮೈ.ಗಳ ಅಂತರದಲ್ಲಿವೆ. ಅವುಗಳಲ್ಲಿ ಪ್ರಖ್ಯಾತವಾದವು ಅಮೆರಿಕ ಸಂಯುಕ್ತಸಂಸ್ಥಾನಕ್ಕೂ ಕೆನಡಕ್ಕೂ ನಡುವಣ ಗಡಿಗಳಾಗಿ ಪರಿಣಮಿಸಿವೆ. ಮಹಾಸರೋವರಗಳೆನಿಸಿಕೊಳ್ಳುವಷ್ಟು ಗಾತ್ರದ ಸರೋವರಗಳು ಕೆನಡದ ಒಳನಾಡಿನಲ್ಲೂ ಇವೆ. ಅವುಗಳಲ್ಲಿ ಗ್ರೇಟ್ ಬೇರ್, ಗ್ರೇಟ್ ಸ್ಲೇವ್ ಮತ್ತು ವಿನಿಪೆಗ್ ಸರೋವರಗಳನ್ನು ಹೆಸರಿಸಬಹುದು.
ಕಾರ್ಡಿಲ್ಯೇರ ಭಾಗದ ಸರೋವರಗಳು ಉದ್ದವಾಗಿಯೂ ಕಡಿದಾಗಿಯೂ ಆಳವಾಗಿಯೂ ಇವೆ. ಅಲ್ಲಿಯ ಸಣ್ಣ ಸರೋವರಗಳ ಸುತ್ತ ಜೌಗುಪ್ರದೇಶಗಳುಂಟು. ಅವನ್ನು ರೆಡ್ ಇಂಡಿಯನ್ ಜನ ಮಸ್ಕೆಗ್ ಎನ್ನುತ್ತಾರೆ. ಕೆನಡದ ಸರೋವರಗಳಲ್ಲಿ ನೀರು ಸಮೃದ್ಧಿಯಾಗಿರುವುದರಿಂದ ಅವುಗಳ ಹೆಚ್ಚಿಗೆ ನೀರು ನದಿಗಳ ಮೂಲಕ ಬಸಿದುಹೋಗುತ್ತದೆ. ಕೆಲವು ಬಂಜರು ಪ್ರದೇಶಗಳಲ್ಲಿ ನೀರಿನ ಆಭಾವದಿಂದ ಸರೋವರಗಳ ನೀರು ಒಂದೇ ಕಡೆ ನಿಂತು, ಬೇಸಗೆಯಲ್ಲಿ ನೀರು ಬತ್ತಿದಾಗ ಸರೋವರದ ಅಂಗಳ ಉಪ್ಪುಗಟ್ಟರುವುದುಂಟು. ಕ್ವಿಲ್ ಸರೋವರ ಇದಕ್ಕೆ ಒಂದು ನಿದರ್ಶನ.

ಕೆನಡದ ನದಿಗಳಿಗೆ ಬಳಸು ಹೆಚ್ಚು. ಸರೋವರಗಳ ನಡುವೆ ಅನುಕ್ರಮ ಸಂಬಂಧ ಕಲ್ಪಿಸುವ ನದಿಗಳು ಹಲವು. ಒಂದೇ ನದಿ ಅನೇಕ ಹೆಸರುಗಳನ್ನು ತಾಳಿರುವುದೂ ಉಂಟು. ಆಂಟೇರಿಯೋ ಸರೋವರದ ಈಶಾನ್ಯದ ಕೊನೆಯಿಂದ ಹರಿದು ಅಟ್ಲಾಂಟಿಕ್ ಸಾಗರವನ್ನು ಸೇರುವ ನದಿ ಸೇಂಟ್ ಲಾರೆನ್ಸ್. ಅದರಿಂದಲೂ ಅದು ಸಂಪರ್ಕ ಹೊಂದಿರುವ ಸರೋವರಗಳಿಂದಲೂ ಖಂಡದ ಹೃದಯಭಾಗಕ್ಕೆ ಜಲಸಂಪರ್ಕ ಲಭ್ಯವಾಗಿದೆ. ಮಾಂಟ್ರಿಯಾಲ್ ಮತ್ತು ಕ್ವಿಬೆಕ್ ಪಟ್ಟಣಗಳಿಗೆ ಜಲಮಾರ್ಗ ಏರ್ಪಡಿಸಿರುವುದು ಈ ನದಿ. ಒಳನಾಡಿನಿಂದ ಹರಿದು ಹಡ್ಸನ್ ಕೊಲ್ಲಿಯನ್ನು ಸೇರುವ ನದಿಗಳಲ್ಲಿ ಡೂಬಾಂಟ್, ಚರ್ಚಿಲ್, ನೆಲ್ಸನ್, ಆಲ್ಬನಿ, ಮೂಸ್, ಈಸ್ಟ್‍ಮೇನ್ ಮತ್ತು ನಾಟ್ಯವೇ ಮುಖ್ಯವಾದವು.
ಆರ್ಕ್‍ಟಿಕ್ ಪ್ರದೇಶದ ಅತ್ಯಂತ ದೊಡ್ಡ ನದಿ ಮಕೆನ್‍ಜಿó ಪೀಸ್ ಮತ್ತು ಆತ ಬ್ಯಾಸ್ಕ ಇದರ ಮುಖ್ಯ ಉಪನದಿಗಳು. ಪೆಸಿಫಿಕ್ ಸಾಗರ ಸೇರುವ ನದಿಗಳಲ್ಲಿ ದೊಡ್ಡವು ಯೂಕಾನ್, ಫ್ರೇಸರ್ ಮತ್ತು ಕೊಲಂಬಿಯ.

ಕೊಲಂಬಿಯ ನದಿ ವಾಯವ್ಯಕ್ಕೆ ಸಾಗಿ 400 ಮೈ.ಗಳಷ್ಟು ದೂರ ದಕ್ಷಿಣಾಭಿಮುಖವಾಗಿ ಹರಿದು ಅಮೆರಿಕ ಸಂಯುಕ್ತಸಂಸ್ಥಾನವನ್ನು ಪ್ರವೇಶಿಸುತ್ತದೆ. ಈ ನದಿಗಿಂತ ಕಿರಿಯದಾದ ಫ್ರೇಸರ್ ನದಿ ಉತ್ತರದಿಂದ ದಕ್ಷಿಣಕ್ಕೆ ಹರಿದು, ನ್ಯೂ ವೆಸ್ಟ್‍ಮಿನ್‍ಸ್ಟರ್ ಬಳಿ ಪೆಸಿಫಿಕ್ ಸಾಗರವನ್ನು ಸೇರುತ್ತದೆ. ಈ ಭಾಗದ ನದಿಗಳು ಆಳವಾದ ಕಣಿವೆಗಳ ಮೂಲಕ ಹಾದು ಸಾಗರವನ್ನು ಪ್ರವೇಶಿಸುತ್ತವೆ. ಖಂಡಾಂತರ ರೈಲುಮಾರ್ಗಗಳು ಈ ನದೀ ಕಣಿವೆಗಳಲ್ಲಿ ಹಾದುಹೋಗುತ್ತವೆ.

ವಾಯುಗುಣ: ಸುಮಾರು 420 ಉ.ಅ.ದಿಂದ ಹಿಡಿದು ಆರ್ಕ್‍ಟಿಕ್ ಪ್ರದೇಶದ ವರೆಗೂ ಸಾಗರಗಳ ತೀರ ಹೊಂದಿರುವ ಕೆನಡ ಸ್ವಾಭಾವಿಕವಾಗಿಯೇ ವಿವಿಧ ವಾಯುಗುಣಗಳಿಂದ ಕೂಡಿದೆ. ಭಾರಿ ವಾಯುರಾಶಿಗಳಿಂದ ಇದರ ವಾಯುಗುಣ ಪ್ರಭಾವಿತವಾಗಿದೆ. ತಣ್ಣಗಿನ ಒಣಗಾಳಿ ಉತ್ತರದಿಂದ ದಕ್ಷಿಣದ ಕಡೆಗೆ ಮಕೆನ್‍ಜಿó ಕಣಿವೆ ಮತ್ತು ಹಡ್ಸನ್ ಕೊಲ್ಲಿಗಳ ಮೂಲಕ ಬೀಸುತ್ತದೆ. ಚಳಿಗಾಲದಲ್ಲಿ ಇದು ಮಹಾಸರೋವರಗಳವರೆಗೂ ಬೀಸಿ, ಅವನ್ನೂ ದಾಟಿ ಸಂಯುಕ್ತ ಸಂಸ್ಥಾನದ ಪ್ರದೇಶವನ್ನೂ ತಾಕಬಹುದು. ಬೇಸಗೆಯಲ್ಲಿ ಮೆಕ್ಸಿಕೋ ಖಾರಿ ಮತ್ತು ಅಟ್ಲಾಂಟಿಕ್ ಸಾಗರದಿಂದ ಬೆಚ್ಚನೆಯ ಮತ್ತು ತೇವಗೂಡಿದ ಗಾಳಿ ಉತ್ತರಕ್ಕೆ ಬೀಸಿ, ಆಗ್ನೇಯ ಕೆನಡವನ್ನು ವ್ಯಾಪಿಸುತ್ತದೆ. ಉತ್ತರ ಪೆಸಿಫಿಕ್‍ನಿಂದ ತಂಪಾದ, ತೇವ ತುಂಬಿದ ಗಾಳಿ ಪಶ್ಚಿಮದ ಅಂಚಿನಲ್ಲಿ ವರ್ಷವೆಲ್ಲ ಬೀಸಿ ಪರ್ವತಪಂಕ್ತಿಗಳನ್ನು ದಾಟಿ ಒಳನಾಡಿನಲ್ಲಿ ಮಳೆ ಸುರಿಸುತ್ತದೆ; ಪಶ್ಚಿಮದಲ್ಲಿ ಚಳಿಗಾಲದಲ್ಲಿ ಮಳೆ ಹೆಚ್ಚು. ಅಮೆರಿಕ ಸಂಯುಕ್ತಸಂಸ್ಥಾನದ ನೈಋತ್ಯ ಭಾಗದ ಮರುಭೂಮಿ ಪ್ರದೇಶದ ಮೇಲಿಂದ ಬೀಸುವ ಗಾಳಿ ಬೇಸಗೆಯ ನಡುಗಾಲದಲ್ಲಿ ದಕ್ಷಿಣ ಕೆನಡದ ಮೇಲೆ ಪ್ರಭಾವ ಬೀರುವುದುಂಟು, ಕೆನಡದ ಬಹುಭಾಗ ಶೀತಪ್ರದೇಶ. ವಾಸಕ್ಕೆ ಹೆಚ್ಚು ಅನುಕೂಲಕರವಲ್ಲ.  ದಕ್ಷಿಣ ಭಾಗ ಮಾತ್ರ ಉಷ್ಣತರ. ಉಷ್ಣತೆ, ಮಳೆ, ಸಸ್ಯ ಬೆಳೆಯುವ ಕಾಲದ ಅವಧಿ ಇವುಗಳ ದೃಷ್ಟಿಯಿಂದ ಕೆನಡವನ್ನು ಹಲವು ವಾಯುಗುಣವಿಭಾಗಗಳಾಗಿ ವಿಂಗಡಿಸಬಹುದು: 1 ಉತ್ತರದ ಆರ್ಕ್‍ಟಿಕ್ ವಾಯುಗುಣ. ಜುಲೈಯ ಸರಾಸರಿ ಉಷ್ಣತೆ 500 ಫ್ಯಾ. ಇರುವ ರೇಖೆಯ ಉತ್ತರದ ಪ್ರದೇಶ. ಕಡಿಮೆ ಉಷ್ಣತೆ. ಉದ್ದನೆಯ ದಿನ. ಧ್ರುವ ಪ್ರದೇಶದ ಬಳಿ ಸೂರ್ಯ ಹಲವು ವಾರಗಳ ಕಾಲ ಮುಳುಗುವುದಿಲ್ಲ. ಇಲ್ಲಿ ಚಳಿಗಾಲ ದೀರ್ಘ, ತೀವ್ರ, ಅಂಧಕಾರಮಯ. ಅವಪಾತ ಬಲು ಕಡಿಮೆ (5"-10"). ಮಣ್ಣಿನ ತಳಭಾಗ ಬಹುತೇಕ ಶಾಶ್ವತವಾಗಿ ಗಡ್ಡೆ ಕಟ್ಟಿರುತ್ತದೆ. 2 ಆರ್ಕ್‍ಟಿಕ್ ವಾಯುಗುಣ ರೇಖೆಯ ದಕ್ಷಿಣಕ್ಕೆ ಉಪ-ಆರ್ಕ್‍ಟಿಕ್ ವಾಯುಗುಣವಿದೆ. 430 ಫ್ಯಾ.ಗಿಂತ ಕಡಿಮೆ ಉಷ್ಣತೆ 5 ತಿಂಗಳುಗಳಿಗಿಂತ ಹೆಚ್ಚು ಕಾಲ ಇರುವುದಿಲ್ಲ. ಚಳಿಗಾಲ ಬಲು ತೀವ್ರ. ಪಶ್ಚಿಮ ಭಾಗದಲ್ಲಿ 10"-12" ಅವಪಾತ. ಪೂರ್ವದಲ್ಲಿ ಇನ್ನೂ ಹೆಚ್ಚು. ಇದರಲ್ಲಿ ಹಿಮದ ಭಾಗವೇ ಅಧಿಕ. 3 ಉತ್ತರ ಮಾರುತೀಯ (ಬೋರಿಯಲ್) ವಾಯುಗುಣದಲ್ಲಿ ಜುಲೈ ಉಷ್ಣತೆ 600 ಫ್ಯಾ.ಗಿಂತ ಹೆಚ್ಚು. ಪಶ್ಚಿಮದಲ್ಲಿ ವರ್ಷದಲ್ಲಿ 12"-14" ಮಳೆ (ಬೇಸಿಗೆಯಲ್ಲಿ). ಪೂರ್ವದಲ್ಲಿ ಹಿಮಪಾತ ಹೆಚ್ಚು. ಇಲ್ಲಿ ಮೃದು ತಿರುಳಿನ ಮರಗಳ ಕಾಡು ಬೆಳೆಯುತ್ತದೆ. 4 ಅಟ್ಲಾಂಟಿಕ್ ವಾಯುಗುಣದಲ್ಲಿ ಚಳಿಗಾಲದ ನಡುವಣ ಉಷ್ಣತೆಯ ಸರಾಸರಿ 150 250 ಫ್ಯಾ. ಬೇಸಿಗೆಯಲ್ಲಿ ಮೂರು ತಿಂಗಳುಗಳ ಕಾಲ 600 ಫ್ಯಾ.ಗಿಂತ ಹೆಚ್ಚು ಉಷ್ಣತೆ. ವಾರ್ಷಿಕ ಅವಪಾತ 40"-55". ಚಳಿಗಾಲದಲ್ಲೇ ಹೆಚ್ಚು ಮಳೆ. ನ್ಯೂ ಬ್ರನ್ಸ್‍ವಿಕ್‍ನ ಕೆಲವು ಭಾಗಗಳಲ್ಲಿ ಚಳಿಗಾಲದಲ್ಲಿ 8'-10' ಹಿಮ ಬೀಳುತ್ತದೆ. ಅಟ್ಲಾಂಟಿಕ್ ತೀರ ಪ್ರದೇಶದಲ್ಲಿ ಬೇಸಿಗೆಯಲ್ಲಿ ಆಗಾಗ್ಗೆ ದಟ್ಟವಾದ ಮಂಜು ಬೀಳುವುದುಂಟು. 5 ಮಹಾಸರೋವರಗಳ ಮತ್ತು ಸೇಂಟ್ ಲಾರೆನ್ಸ್ ನದಿಯ ಪ್ರದೇಶದಲ್ಲಿ ಸಾಮಾನ್ಯವಾಗಿ ಅಟ್ಲಾಂಟಿಕ್ ಪ್ರದೇಶದಲ್ಲಿದ್ದಂತೆಯೇ ವಾಯುಗುಣ ಇರುತ್ತದೆ. ಆದರೆ ಇಲ್ಲಿ ವಸಂತಾಗಮನವಾಗುವುದು ಬೇಗ. ಬೇಸಿಗೆ ಹೆಚ್ಚು ದೀರ್ಘ. ಮಾಂಟ್ರಿಯಾಲ್ ಟರಾಂಟೋಗಳಲ್ಲಿ ಜುಲೈ ಉಷ್ಣತೆ 700 ಫ್ಯಾ. ಸರೋವರಗಳ ನಡುವಣ ಪರ್ಯಾಯದ್ವೀಪ ಪ್ರದೇಶದಲ್ಲಿ (ದಕ್ಷಿಣ ಆಂಟೇರಿಯೋ) ಉಷ್ಣತೆ ಇನ್ನೂ ಹೆಚ್ಚು. ವರ್ಷವೆಲ್ಲ ಸಮನಾಗಿ ಅವಪಾತ. ವಾರ್ಷಿಕ ಸರಾಸರಿ 30"-40". ಬೇಸಗೆಯಲ್ಲಿ ಒಮ್ಮೊಮ್ಮೆ ಅನಾವೃಷ್ಟಿ ಸಂಭವಿಸುವುದುಂಟು. 6 ಹುಲ್ಲುಗಾವಲಿನ ಪ್ರದೇಶದಲ್ಲಿ ಮಳೆ ಸಾಧಾರಣ (12"-16"). ಇದು ಬೀಳುವುದು ಬಹುತೇಕ ಬೇಸಿಗೆಯಲ್ಲಿ. ಬೇಸಿಗೆಯ ನಡುಗಾಲದಲ್ಲಿ ಉಷ್ಣತೆಯ ಸರಾಸರಿ 650 ಫ್ಯಾ. ವಿನಿಪೆಗ್, ಪ್ರಿನ್ಸ್‍ಆಲ್ಬರ್ಟ್ ಮತ್ತು ಎಡ್ಮಂಟನ್‍ಗಳಲ್ಲಿ ಚಳಿಗಾಲದ ನಡುವಣ ಉಷ್ಣತೆ 00 ಫ್ಯಾ. 7 ಪೆಸಿಫಿಕ್ ಅಂಚಿನಲ್ಲಿ ಚಳಿ ತೀವ್ರವಿಲ್ಲ: ವಾಯುಗುಣ ತೇವಪೂರಿತ. ಹಿಮ ಬಿಂದುವಿಗಿಂತ ಕೆಳಕ್ಕೆ ಉಷ್ಣತೆ ಸಾಮಾನ್ಯವಾಗಿ ಇಳಿಯುವುದಿಲ್ಲ. ಬಹುಭಾಗದಲ್ಲಿ ವರ್ಷಕ್ಕೆ 80" ಅವಪಾತ. 8 ಪಶ್ಚಿಮ ಪರ್ವತ ಪ್ರದೇಶದಲ್ಲಿ ಎತ್ತರ ಹಾಗೂ ಮಳೆ ಮಾರುತದ ಪ್ರಭಾವಕ್ಕೆ ಅನುಗುಣವಾಗಿ ಶಿಖರಗಳು ಹಿಮಾವೃತ.

ಸ್ವಾಭಾವಿಕ ಸಸ್ಯಗಳು ಪ್ರಾಣಿಗಳು: ಸಮುದ್ರತೀರವುಳ್ಳ ಪ್ರಾಂತ್ಯ, ಕ್ವಿಬೆಕ್ ಮತ್ತು ಪಶ್ಚಿಮ ಆಂಟೇರಿಯೋಗಳಲ್ಲಿಯ ಸ್ವಾಭಾವಿಕ ಸಸ್ಯಗಳು ಒಂದೇ ರೀತಿಯವು. ಸೇಂಟ್ ಲಾರೆನ್ಸ್ ನದಿಯ ದಕ್ಷಿಣ ಭಾಗ ಮತ್ತು ಲಾರೆನ್ಸ್ ಖಾರಿಯ ಪ್ರದೇಶಗಳಲ್ಲಿ ಆರ್ಕ್‍ಟಿಕ್ ಹಾಗೂ ಉಪ-ಆರ್ಕ್‍ಟಿಕ್ ವಲಯಗಳಲ್ಲಿ ಬೆಳೆಯುವ ಸಸ್ಯಗಳಿವೆ. ಅರಣ್ಯಗಳಿಂದ ಕೂಡಿದ ಆಂಟೇರಿಯೋ ಪ್ರಾಂತ್ಯದ ಆಚೆ. ಮ್ಯಾನಿಟೋಬ ಪ್ರಾಂತ್ಯದಲ್ಲಿ ಮತ್ತು ವಾಯವ್ಯಭಾಗದಲ್ಲಿ ಹುಲ್ಲುಗಾವಲುಗಳು ರೆಡ್ ನದಿಯಿಂದ ರಾಕಿ ಪರ್ವತಗಳ ತಪ್ಪಲವರೆಗೂ ಹರಡಿವೆ. ಕೊಲಂಬಿಯದ ಪರ್ವತ ಭಾಗಗಳಲ್ಲಿ ವಾಯುಗುಣಕ್ಕನುಗುಣವಾಗಿ ಹಲವಾರು ಬಗೆಯ ಸಸ್ಯಗಳಿವೆ. ಪೆಸಿಫಿಕ್ ಸಾಗರದ ಅಂಚಿನ ಅರಣ್ಯಗಳಲ್ಲಿ ಹಾಗೂ ಬಯಲುಗಳಲ್ಲಿ ಕಾಡುಹೂ ಗಿಡಗಳು ತುಂಬಿವೆ.
ಸೇಂಟ್ ಲಾರೆನ್ಸ್ ತಳನಾಡಿನಲ್ಲಿ ಅರಣ್ಯಗಳನ್ನು ಹೆಚ್ಚಾಗಿ ಕಡಿದುಹಾಕಿದ್ದಾರೆ. ರಕ್ಷಿತ ಅರಣ್ಯಗಳು ಕೆನಡಿಯನ್ ಫಲಕಭಾಗಗಳಿಲ್ಲಿವೆ. ಉತ್ತರ ಆರ್ಕ್‍ಟಿಕ್ ಭಾಗಗಳಲ್ಲಿ ತಂಡ್ರದ ಪಾಚಿ, ಹುಲ್ಲು, ಬಂಡೆಗೆ ತಗಲುವ ಕಲ್ಲುಹೂ ಹಾಗೂ ಕುಬ್ಜಸಸ್ಯಗಳಿವೆ. ಲ್ಯಾಬ್ರಡಾರ್ ತೀರದಲ್ಲಿ ಅರಣ್ಯಗಳಿದ್ದರೂ ಚೌಬೀನೆಗೆ ಯುಕ್ತವಾದ ಮರಗಳಿಲ್ಲ. ಲಾರೆನ್ಸ್ ನದಿಯ ಉತ್ತರದಲ್ಲಿ ಶಂಕುಧರ ವೃಕ್ಷಗಳು ಹೆಚ್ಚು ಸುಪೀರಿಯರ್ ಸರೋವರದಿಂದ ಕ್ವಿಬೆಕ್ ವರೆಗೆ ಒತ್ತಾದ ಅರಣ್ಯಗಳಿವೆ. ಅದು ಇಂದಿಗೂ ಪೂರ್ವ ಕೆನಡದ ದಿಮ್ಮಿ ಉತ್ಪಾದನ ಪ್ರದೇಶ. ಅಲ್ಲಿ ಬಿಳಿಯ ಪೈನ್, ಸ್ಪ್ರೂಸ್, ಹೆಮ್ಲಾಕ್, ಹಳದಿ ಬರ್ಚ್ ಹಾಗೂ ಮೇಪಲ್ ಮರಗಳು ಹೇರಳವಾಗಿವೆ. ಲ್ಯಾಬ್ರಡಾರಿನ ದಕ್ಷಿಣ ಭಾಗದಿಂದ ಹಿಡಿದು ಅಲಾಸ್ಕದ ಅಂಚಿನ ವರೆಗೆ ವ್ಯಾಪಕವಾಗಿ ಪೈನ್ ಜಾತಿಯ ವೃಕ್ಷಗಳಿಂದ ಕೂಡಿದ ಉತ್ತರ ಅರಣ್ಯ ವಲಯವುಂಟು. ಅಲ್ಲಿ ಜಾಕ್, ಪೈನ್, ಬಿಳಿಯ ಬರ್ಚ್, ವಿಲೊ ಮೊದಲಾದ ಮರಗಳಿವೆ. ಅಲ್ಲಿಯ ಬಿಳಿ ಸ್ಪ್ರೂಸ್ ಮತ್ತು ಕರಿ ಸ್ಪ್ರೂಸ್ ಮರಗಳ ದಿಮ್ಮಿಗಳು ಕಾಗದ ತಯಾರಿಕೆಗೆ ಬೇಕಾದ ತಿರುಳಿಗೆ ಉಪಯೋಗವಾಗುತ್ತವೆ.

ಉತ್ತರ ಶೀತವಲಯದಲ್ಲಿ ಕಸ್ತೂರಿ ವೃಷಭ; ಅನೇಕ ಕಡೆಗಳಲ್ಲಿ ವಿವಿಧ ಬಗೆಯ ಕಡವೆಗಳು, ವರ್ಜಿನಿಯ ಹುಲ್ಲೆ, ಕರಿಬಾಲದ ಜಿಂಕೆ, ಕವಲು ಕೊಂಬಿನ ಜಿಂಕೆ; ಆಲ್ಬರ್ಟ ಮತ್ತು ಮೆಕೆನ್‍ಜಿó ಉತ್ತರ ಭಾಗಗಳಲ್ಲಿ ಕಾಡುಕೋಣ; ಕ್ವಿಬೆಕ್, ಪೆಸಿಫಿಕ್ ಸಾಗರ ಪ್ರದೇಶ ಮತ್ತು ಪೀಸ್ ನದಿಯ ಕಡೆ ವಾಪಿಟಿ; ಪಶ್ಚಿಮ ಪರ್ವತಗಳಲ್ಲಿ ಮತ್ತು ಇತರ ಕಡೆ ಕರಿಯ ಕರಡಿ; ಬ್ರಿಟಿಷ್ ಕೊಲಂಬಿಯದಲ್ಲಿ ಪ್ಯೂಮ; ಎಲ್ಲ ಭಾಗಗಳಲ್ಲೂ ಸಾಮಾನ್ಯವಾಗಿ ಬೆಳ್ಳಿನರಿ, ಲಿಂಕ್ಸ್, ಬೀವರ್, ನೀರುನಾಯಿ, ಮಾರ್ಟಿನ್, ಫಿಷರ್, ಮಿಂಕ್, ಸ್ಕಂಕ್ ಮೊದಲಾದ ತುಪ್ಪುಳು ಪ್ರಾಣಿಗಳು; ರಾಕಿ ಪರ್ವತಗಳಲ್ಲಿ ವಿವಿಧ ಬಗೆಯ ಕಾಡುಮೇಕೆಗಳು ಮತ್ತು ಕಾಡುಕುರಿಗಳು; ಪಶ್ಚಿಮದಲ್ಲಿ ಕಾಡುಕೋಳಿ; ಆರ್ಕ್‍ಟಿಕ್ ಪ್ರದೇಶದಲ್ಲಿ ಬಾತುಗಳು; ಆಂಟೇರಿಯೋದಲ್ಲಿ ಕಾಡು ಟರ್ಕಿಕೋಳಿ ಇವೆ.

ಜನ, ಜೀವನ: ಕೆನಡದ ಮಾನವ ಇತಿಹಾಸಕ್ಕೆ ಹಲವಾರು ವಲಸೆಗಳ ಮತ್ತು ನೆಲಸುಗಳ ಹಿನ್ನೆಲೆಯುಂಟು. ಅದರ ಪ್ರಜಾಸಂಖ್ಯೆಯಲ್ಲಿ ಬ್ರಿಟಿಷ್ ಮತ್ತು ಫ್ರೆಂಚ್ ಜನಾಂಗದವರೇ ಹೆಚ್ಚು. 1966ರ ಜನಗಣತಿಯ ಮೇರೆಗೆ ಅದರ ಜನಸಂಖ್ಯೆ 2,00,14,880. ಫ್ರೆಂಚ್ ಕೆನಡಿಯನರಲ್ಲಿ ಬಹಳ ಮಂದಿ 18ನೆಯ ಶತಮಾನದಲ್ಲಿ ನಾರ್ಮಂಡಿ ಮತ್ತು ವಾಯುವ್ಯ ಫ್ರಾನ್ಸಿನ ಇತರ ಭಾಗಗಳಿಂದ ವಲಸೆ ಬಂದು ನ್ಯೂ ಫ್ರಾನ್ಸ್ ಮತ್ತು ಅಕೇಡಿಯ ಭಾಗಗಳಲ್ಲಿ ನೆಲಸಿದವರ ಸಂತತಿಯವರಾಗಿದ್ದಾರೆ. ಬ್ರಿಟಿಷ್ ಜನಾಂಗದವರು ಭಾಗಶಃ ಅಮೆರಿಕ ಸಂಯುಕ್ತ ಸಂಸ್ಥಾನದ ಕಡೆಯಿಂದ ಉತ್ತರಕ್ಕೆ ಸಾಗಿಬಂದು ನೆಲಸಿದ ಆಂಗ್ಲರ ಸಂತತಿಯವರಾಗಿದ್ದಾರೆ. ಕಳೆದ ಶತಮಾನದ ಕೊನೆಯಿಂದ ಇಂಗ್ಲೆಂಡಿನಿಂದ ನೇರವಾಗಿ ವಲಸೆ ಬಂದ ಬ್ರಿಟಿಷ್ ಜನರ ಸಂತತಿಯವರೂ ಇದ್ದಾರೆ. ವಲಸೆಗಳನ್ನು ಸ್ವಾಗತಿಸುವ ನೀತಿ 1890ರಲ್ಲಿ ಪ್ರಾರಂಭವಾಯಿತು. ಆಗಿನಿಂದ ಅನೇಕ ಐರೋಪ್ಯ ಬುಡಕಟ್ಟುಗಳ ಜನರು ಸಹ ಕೆನಡದಲ್ಲಿ ನೆಲಸಿದ್ದಾರೆ. ಕೆನಡದ ಹುಲ್ಲುಗಾವಲು ಪ್ರಾಂತ್ಯವನ್ನು ವಸತಿಗೆ ತೆರೆದಾಗ, ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿಯ ಬೆಳೆವಣಿಗೆಯ ದರದಲ್ಲೇ ಕೆನಡದ ಜನಸಂಖ್ಯೆಯೂ ಬೆಳೆಯಲಾರಂಭಿಸಿತು. ಸೇಂಟ್ ಲಾರೆನ್ಸ್ ಕಣಿವೆಯಲ್ಲಿ ದೊಡ್ಡ ಪಟ್ಟಣಗಳು ಸ್ಥಾಪಿತವಾಗಿ ವೃದ್ಧಿಗೊಂಡುವು. 1918-1930ರಲ್ಲಿ ಕೆನಡಕ್ಕೆ 5 ಲಕ್ಷ ಬ್ರಿಟಿಷರು ವಲಸೆ ಬಂದರು. ಕೆನಡಕ್ಕೆ ವಲಸೆ ಬರುವುದನ್ನು 1919ರಿಂದ ನಿಯಂತ್ರಣಕ್ಕೆ ಒಳಪಡಿಸಲಾಗಿದೆ.
ಕೆನಡದ ಮೂಲನಿವಾಸಿಗಳು ಇಂಡಿಯನರು. ಅವರಲ್ಲಿ ಮುಕ್ಕಾಲು ಭಾಗ ಜನ ಕೆನಡಿಯನ್ ಫಲಕ ಮತ್ತು ಕಾರ್ಡಿಲ್ಯೇರ ಪ್ರದೇಶಗಳಲ್ಲಿ ಅವರಿಗಾಗಿ ಏರ್ಪಡಿಸಲಾದ ಮೀಸಲು ಸ್ಥಳಗಳಲ್ಲಿ ವಾಸವಾಗಿದ್ದಾರೆ. ಎಸ್ಕಿಮೋ ಜನರ ಸಂಖ್ಯೆ ಕಡಿಮೆ.

ಕೆನಡದಲ್ಲಿ ರೋಮನ್ ಕ್ಯಾಥೊಲಿಕ್ ಮತ್ತು ಪ್ರಾಟಿಸ್ಟಂಟ್ ಮತಗಳನ್ನು ಅನುಸರಿಸುವ ಜನರಿದ್ದಾರೆ. ಎಸ್ಕಿಮೋ ಮತ್ತು ಇಂಡಿಯನ್ ಜನ ತಮ್ಮ ಸಂಪ್ರದಾಯ ಮತ್ತು ನಂಬಿಕೆಗಳನ್ನೇ ಅನುಸರಿಸುತ್ತಾರೆ.

ಕೃಷಿ: ಗೋಧಿ ಕೆನಡದ ಮುಖ್ಯ ಬೆಳೆ. ಅದನ್ನು ಆಲ್ಬರ್ಟ, ಸ್ಯಾಸ್ಕ್ಯಾಚೆವನ್, ಬ್ರಿಟಿಷ್ ಕೊಲಂಬಿಯ ಮತ್ತು ಹುಲ್ಲುಗಾವಲುಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಕ್ವಿಬೆಕ್, ಆಂಟೇರಿಯೋಗಳಲ್ಲಿ ಹೈನುಗಾರಿಕೆ ಹೆಚ್ಚು; ಕ್ಷೀರೋತ್ಪನ್ನಗಳನ್ನು ಡಬ್ಬಗಳಲ್ಲಿ ಶೇಖರಿಸಿ ರಫ್ತು ಮಾಡುತ್ತಾರೆ. ನೋವಸ್ಕೋಷ, ದಕ್ಷಿಣ ಕ್ವಿಬೆಕ್, ಆಂಟೇರಿಯೋ, ಬ್ರಿಟಿಷ್ ಕೊಲಂಬಿಯಗಳಲ್ಲಿ ವಿವಿಧ ಹಣ್ಣುಗಳು ಬೆಳೆಯುತ್ತವೆ. ಸಕ್ಕರೆ ಬೀಟನ್ನು ಅನೇಕ ಕಡೆ ಬೇಸಾಯ ಮಾಡುತ್ತಾರೆ. ಕೆನಡದಲ್ಲಿ ಉತ್ತಮ ಬಗೆಯ ತಂಬಾಕು ಬೆಳೆಯುತ್ತದೆ. ಬಾರ್ಲಿ, ಓಟ್ಸ್, ಆಲೂಗೆಡ್ಡೆ ಇವು ಈ ದೇಶದ ಇತರ ಬೆಳೆಗಳು.

ಕೈಗಾರಿಕೆ: ಗಣಿಗಳು: ಕೆನಡದಲ್ಲಿ ಖನಿಜಸಂಪತ್ತು ಯಥೇಚ್ಛವಾಗಿದೆ. ನೋವ ಸ್ಕೋಷ, ಆಲ್ಬರ್ಟ ಮತ್ತು ಬ್ರಿಟಿಷ್ ಕೊಲಂಬಿಯ ಪ್ರಾಂತ್ಯಗಳಲ್ಲಿ ಹೆಚ್ಚು ಕಲ್ಲಿದ್ದಲು ದೊರಕುತ್ತದೆ. ಬ್ರಿಟಿಷ್ ಕೊಲಂಬಿಯ ಮತ್ತು ಯೂಕಾನ್ ಚಿನ್ನದ ಗಣಿಗಳಿಗೆ ಪ್ರಸಿದ್ಧಿ. ಆಂಟೇರಿಯೋದ ಪಾರ್ಕುಪೈನ್ ಚಿನ್ನದ ಗಣಿ ಪ್ರಪಂಚದ ಪ್ರಮುಖ ಚಿನ್ನದ ಗಣಿಗಳಲ್ಲಿ ಮೂರನೆಯದು. ಗ್ರೇಟ್ ಸ್ಲೇವ್ ಸರೋವರದ ಉತ್ತರಕ್ಕೆ ಎಲ್ಲೋನೈಫ್‍ನಲ್ಲಿ ಮತ್ತು ವ್ಯಾಂಕೂವರ್‍ನಲ್ಲಿ ಹೊಸ ಚಿನ್ನದ ಗಣಿಗಳು ಪ್ರಾರಂಭವಾಗಿವೆ. ಬೆಳ್ಳಿ, ಸೀಸ, ತವರದ ಗಣಿಗಳು ಕೆನಾಗಮಿ ನಗರ ಮತ್ತು ಯೂಕಾನ್ ಪ್ರಾಂತ್ಯಗಳಲ್ಲಿವೆ. ಕ್ವಿಬೆಕ್, ಆಂಟೇರಿಯೋ ಮತ್ತು ಬ್ರಿಟಿಷ್ ಕೊಲಂಬಿಯಗಳಲ್ಲಿ ತಾಮ್ರ ಹೇರಳ. ನಿಕ್ಕಲ್ ಆಂಟೇರಿಯೋದ ಸಡ್‍ಬರಿ ಜಿಲ್ಲೆಯಲ್ಲಿ ಸಿಗುತ್ತದೆ. 1951ರಲ್ಲಿ ಲಿನ್ ಸರೋವರದ ಬಳಿ (ಮ್ಯಾನಿಟೋಬ) ನಿಕ್ಕಲ್ ಸಿಕ್ಕಿತು. ಅಲ್ಲಿ ಗಣಿಗಳು ಆರಂಭವಾಗಿವೆ. ಕೆನಡದಲ್ಲಿ ಗ್ಯಾಸೊಲಿನ್ ಹೇರಳವಾಗಿ ಸಿಗುತ್ತದೆ. ಆಲ್ಬರ್ಟದ ಟರ್ನರ್ ಕಣಿವೆಯ ಎಣ್ಣೆ ಗಣಿಗಳು ಪ್ರಮುಖವಾದವು. ದೊಡ್ಡ ಕೊಳವೆಗಳಲ್ಲಿ ಇದನ್ನು ದೂರ ಪ್ರಾಂತ್ಯಗಳಿಗೆ ಸಾಗಿಸುತ್ತಾರೆ. ಅವುಗಳಲ್ಲಿ ಎಡ್‍ಮಂಟನ್‍ನಿಂದ ವ್ಯಾಂಕೂವರ್ ವರೆಗೆ ಹಾಕಿರುವ 718 ಮೈಲಿ ಕೊಳವೆಯೂ ಹುಲ್ಲುಗಾವಲು ಪ್ರದೇಶದ ಎಣ್ಣೆಯನ್ನು 2,000 ಮೈಲಿಗಳಾಚೆಗೆ, ಪೂರ್ವದಲ್ಲಿರುವ ಮಾಂಟ್ರಿಯಾಲ್ ನಗರಕ್ಕೆ, ಸಾಗಿಸುವ ಕೊಳವೆಯೂ ಮುಖ್ಯವಾದವು.
ಅರಣ್ಯ ಕೈಗಾರಿಕೆ: ಅಮೆರಿಕದ ಅರಣ್ಯಗಳಲ್ಲಿ ಚೌಬೀನೆಗೆ ಯುಕ್ತವಾದ ಮರಗಳು ದೊರಕುತ್ತವೆ. ಕಾಗದ ತಯಾರಿಕೆಗೆ ತಿರುಳು ಒದಗಿಸುವ ಮರಗಳು ಹೇರಳ. ಕೆನಡದ 40 ಪ್ರಮುಖ ಕೈಗಾರಿಕೆಗಳಲ್ಲಿ ಕಾಗದ ತಯಾರಿಕೆ ಒಂದು. ಕಾರ್ನರ್ ಬ್ರೂಕ್, ಗ್ರ್ಯಾಂಡ್ ಫಾಲ್ಸ್, ತ್ರೀ ರಿವರ್ಸ್, ಕಾರ್ನ್‍ವಾಲ್, ಪೋರ್ಟ್ ಅರ್ಥರ್, ಪೋರ್ಟ್ ವಿಲಿಯಂ, ಕ್ವಿಬೆಕ್ ನಗರ, ವ್ಯಾಂಕೂವರ್ ಇವು ಕಾಗದ ತಯಾರಿಕೆ ಕೇಂದ್ರಗಳು.

ತುಪ್ಪುಳು ಕೈಗಾರಿಕೆ: ತುಪ್ಪುಳು ಸಂಗ್ರಹ ಮತ್ತು ವ್ಯಾಪಾರ ಕೆನಡದಲ್ಲಿ ಬಹಳ ಕಾಲದಿಂದ ನಡೆಯುತ್ತಿದೆ. ಇದಕ್ಕೆ ಹೆಚ್ಚು ಬೇಡಿಕೆ ಇರುವುದರಿಂದ ಕೆನಡದ ವಿವಿಧ ಭಾಗಗಳಲ್ಲಿ ತುಪ್ಪುಳು ಪ್ರಾಣಿಗಳನ್ನು ಸಾಕುವ, ಅದರಲ್ಲೂ ವಿಶೇಷವಾಗಿ ಬೆಳ್ಳಿನರಿ ಮತ್ತು ಕರಿಯ ನರಿಗಳನ್ನು ಸಾಕುವ ಕ್ಷೇತ್ರಗಳಿವೆ. ಪ್ರಿನ್ಸ್ ಎಡ್ವರ್ಡ್ ದ್ವೀಪ, ಕ್ವಿಬೆಕ್ ಮತ್ತು ಆಂಟೇರಿಯೋಗಳಲ್ಲಿ ತುಪ್ಪುಳು ಸಂಗ್ರಹದ ಮತ್ತು ತುಪ್ಪುಳು ವಸ್ತುಗಳ ತಯಾರಿಕೆಯ ಉದ್ಯಮಗಳಿವೆ.

ಮೀನುಗಾರಿಕೆ: ಮೀನುಗಾರಿಕೆ ಕೆನಡದ ಹಳೆಯ ಕೈಗಾರಿಕೆ. ಪೆಸಿಫಿಕ್ ಮತ್ತು ಅಟ್ಲಾಂಟಿಕ್ ಸಾಗರತೀರಗಳಲ್ಲಿ ಮತ್ತು ಒಳನಾಡ ಸರೋವರಗಳಲ್ಲಿ ಆಧುನಿಕ ಸಾಧನಗಳಿಂದ ಮತ್ತು ವಿಧಾನಗಳಲ್ಲಿ ಮೀನು ಹಿಡಿಯುತ್ತಾರೆ. ಆಮೆರಿಕ ಸಂಯುಕ್ತ ಸಂಸ್ಥಾನದೊಡನೆ ಮಾಡಿಕೊಂಡ ಒಡಂಬಡಿಕೆಯ ಮೇರೆಗೆ ಸಾಗರತೀರಗಳಲ್ಲಿ ಮೀನು ಹಿಡಿಯುವ ಉದ್ಯಮ ಕ್ರಮಗೊಂಡಿರುವುದಲ್ಲದೆ, ಸರ್ಕಾರ ಬೆಸ್ತರಿಗೆ ಉತ್ತೇಜಕವಾಗಿ ಬಹುಮಾನಗಳನ್ನು ನೀಡುತ್ತದೆ.

ಸಾರಿಗೆ ಸಂಪರ್ಕ: ಕೆನಡದ ಜನ ಗೋಧಿ, ಚೌಬೀನೆ, ಮರದ ತಿರುಳು, ಕಾಗದ, ಖನಿಜಗಳು ಇವೇ ಮೊದಲಾದ ವಸ್ತುಗಳನ್ನು ಒತ್ತಾದ ಜನಸಂಖ್ಯೆಯುಳ್ಳ ಕೈಗಾರಿಕೆಯ ರಾಷ್ಟ್ರಗಳಿಗೆ ರಫ್ತು ಮಾಡುತ್ತಾರೆ. ಈ ಸರಕುಗಳ ರವಾನೆಯಲ್ಲಿ ಅಗ್ಗದ ಜಲಸಾರಿಗೆಯದು ಮುಖ್ಯ ಪಾತ್ರ. ಭೌಗೋಳಿಕ ಪರಿಸ್ಥಿತಿಗಳಿಂದಾಗಿ ಕೆನಡದ ಬಂದರುಗಳು ಅನೇಕ ಕಡೆ ಅನುಕೂಲವಾಗಿಲ್ಲ. ಶೀತ ಕಾಲದಲ್ಲಿ ಒಳನಾಡಿನ ಮಾಂಟ್ರಿಯಾಲ್ ಬಂದರು ಮುಚ್ಚಿರುತ್ತದೆ; ಹ್ಯಾಲಿಫಾಕ್ಸ್ ಮತ್ತು ಸೇಂಟ್ ಜಾನ್ ಬಂದರುಗಳು ಒಳನಾಡಿಗೆ ಬಲು ದೂರದಲ್ಲಿವೆ. ಪನಾಮಾ ಕಾಲುವೆಯನ್ನು ತೆರೆದ ಮೇಲೆ ವ್ಯಾಂಕೂವರ್ ಬಂದರು ಸರಕುಗಳ ರಫ್ತಿಗೆ ಮುಖ್ಯಕೇಂದ್ರವಾಯಿತು. ಹುಲ್ಲುಗಾವಲಿನಲ್ಲಿ ಬೆಳೆಯುವ ಗೋಧಿಯನ್ನು ಪೂರ್ವದ ಮಹಾಸರೋವರಗಳ ಅಂಚಿಗೆ ಸಾಗಿಸಲು ಅನೇಕ ಕಾಲುವೆಗಳು ಏರ್ಪಟ್ಟಿವೆ. ಅವುಗಳಲ್ಲಿ ಕೆನೆಡಿಯನ್ ಕಾಲುವೆಯ ಆಳ 19'. ವೆಲಂಡ್ ಕಾಲುವೆ 30' ಆಳವಿದೆ. ಹಡಗುಗಳು ಆಂಟೇರಿಯೋ ಸರೋವರಕ್ಕೆ ಹೋಗಲು ಇದು ಸಹಾಯಕ. ಸೇಂಟ್ ಲಾರೆನ್ಸ್ ನದಿಯ ಜಲಮಾರ್ಗಗಳ ಮೂಲಕ ಹಡಗುಗಳು ಸಾಗರತೀರವನ್ನು ಸೇರುತ್ತವೆ.
ಬಯಲುಗಳಿಂದ ಗೋಧಿಯ ಸಾಗಣೆಗೆ ರೈಲುಮಾರ್ಗಗಳು ಮತ್ತೊಂದು ಅನುಕೂಲ ಸಾಧನ. 1850ರ ದಶಕದಲ್ಲಿ ಕೆನಡದಲ್ಲಿ ರೈಲು ಮಾರ್ಗಗಳನ್ನು ಹಾಕಲು ಪ್ರಾರಂಭಿಸಿದರು. ಹಲವಾರು ರೈಲುಮಾರ್ಗಗಳು ಕೆನಡಿಯನ್ ನ್ಯಾಷನಲ್ ರೈಲ್ವೆ ಸಂಸ್ಥೆಗೆ ಸೇರಿವೆ. ಅಂತರವಸಾಹತು ರೈಲುಮಾರ್ಗಗಳು, ಕೆನಡಿಯನ್ ನಾರ್ದರನ್, ಗ್ರಾಂಡ್ ಟ್ರಂಕ್ ಪೆಸಿಫಿಕ್ ಮತ್ತು ನ್ಯಾಷನಲ್ ಟ್ರಾನ್ಸ್ ಕಾಂಟಿನೆಂಟಲ್-ಇವೆಲ್ಲವೂ ಸೇರ್ಪಡೆಯಾಗಿ ಈಗ ಸರ್ಕಾರದ ಮಾಲೀಕತೆಯಲ್ಲಿ ಕೆನಡಿಯನ್ ನ್ಯಾಷನಲ್ ರೈಲ್ವೆ ಸಂಸ್ಥೆ ಏರ್ಪಟ್ಟಿದೆ. ಅಂತರಕೆನಡ ವಿಮಾನ ಸಂಚಾರದಿಂದ ಅಟ್ಲಾಂಟಿಕ್ ತೀರದಿಂದ ಪೆಸಿಫಿಕ್ ತೀರದ ವರೆಗೆ ತ್ವರಿತ ಪ್ರಯಾಣ ಸಾಧ್ಯವಾಗಿದೆ. ಮೋಟಾರು ಸಂಚಾರ ಹೆಚ್ಚಾಗಿದೆ. ನ್ಯೂ ಫೌಂಡ್‍ಲಂಡಿನಿಂದ ಬ್ರಿಟಿಷ್ ಕೊಲಂಬಿಯ ವರೆಗೆ 5,000 ಮೈ. ಹೆದ್ದಾರಿ ಹೊಸದಾಗಿ ಏರ್ಪಟ್ಟಿದೆ.

ನಗರಗಳು, ಪಟ್ಟಣಗಳು: ಕೆನಡದ ಪ್ರಮುಖ ನಗರಗಳು ವ್ಯಾಪಾರಕ್ಕೆ ಯೋಗ್ಯವಾದ ಸ್ಥಳಗಳಲ್ಲಿ ಸ್ಥಾಪಿತವಾಗಿ ಮನೋಹರವಾದ ಪರಿಸರ ಪಡೆದಿವೆ. ಪೆಸಿಫಿಕ್ ಸಾಗರದ ಅಂಚಿನ ವ್ಯಾಂಕೂವರ್ ನಗರದ ಹಿನ್ನೆಲೆಯಲ್ಲಿ ಹಿಮಚುಂಬಿತ ಪರ್ವತಗಳಿವೆ. ಆಂಟೇರಿಯೋ ಸರೋವರದ ಅಂಚಿನಲ್ಲಿರುವ ಟರಾಂಟೋ ಪ್ರಕೃತಿಯ ಸೊಬಗಿನ ನಡುವೆ ಇದೆ. ಮಾಂಟ್ರಿಯಾಲ್ ಪಟ್ಟಣ ಸೇಂಟ್ ಲಾರೆನ್ಸ್ ನದಿಗೆ ಎದುರಾಗಿರುವ ಬೆಟ್ಟದ ತಪ್ಪಲಲ್ಲಿ ನಿರ್ಮಿತವಾಗಿದೆ. ಕ್ವಿಬೆಕ್ ನಗರ ಸಹ ಅದೇ ನದಿಯ ಅಂಚಿನಲ್ಲಿದೆ. ಕೆನಡದ ರಾಜಧಾನಿ ಆಟ್ಟವ ಅದೇ ಹೆಸರಿನ ನದಿಯ ತೀರದಲ್ಲಿದೆ. ನೋವ ಸ್ಕೋಷದ ಮನೋಹರವಾದ ಕಡಲತೀರದಲ್ಲಿ ಹ್ಯಾಲಿ ಫ್ಯಾಕ್ಸ್ ನಗರವಿದೆ; ಅದಕ್ಕೆ ಅತ್ಯುತ್ತಮವಾದ ಸ್ವಾಭಾವಿಕ ಬಂದರಿದೆ. ಲಾಭವಿದ್ದಲ್ಲಿ ಜನ ಎಂಬಂತೆ ಜನಜೀವನ ಕಷ್ಟವಾದ ಶೀತಪ್ರದೇಶಗಳಲ್ಲಿ ಸಹ ನಗರಗಳು ಏರ್ಪಟ್ಟಿವೆ. ಉತ್ತರದಲ್ಲಿ ಚಿನ್ನ ಸಿಕ್ಕುವೆಡೆ ಇರುವ ನಗರ ಎಲ್ಲೋನೈಫ್. ಮಕೆನ್‍ಜಿó ನದಿಯ ಪಶ್ಚಿಮ ನಾಲೆಯ ಹಿಮಗಟ್ಟಿದ ದಂಡೆಯ ಮೇಲೆ ಇರುವ ಅಕ್ಲಾವಿಕ್ ತುಪ್ಪುಳು ವ್ಯಾಪಾರ ಕೇಂದ್ರ. ಎಡ್‍ಮಂಟನ್ ಮತ್ತು ಕಾಲ್ಗರಿ (ಆಲ್ಬರ್ಟ), ವಿಕ್ಟೋರಿಯ (ಬ್ರಿಟಿಷ್ ಕೊಲಂಬಿಯ), ಸೇಂಟ್ ಜಾನ್ಸ್ (ನ್ಯೂ ಫೌಂಡ್‍ಲೆಂಡ್), ಷಾರ್ಲಟ್ ಟೌನ್ (ಪ್ರಿನ್ಸ್ ಎಡ್ವರ್ಡ್ ದ್ವೀಪ), ರೆಜಿನ, ಸ್ಯಾಸ್ಕ್ಯಾಚೆವನ್ ಮತ್ತು ಹ್ವೈಟ್ ಹಾರ್ಸ್ (ಯೂಕಾನ್)-ಇವು ಇತರ ಮುಖ್ಯ ಸ್ಥಳಗಳು.
ಕೆನಡಿಯನ್ ಫೂಟ್‍ಬಾಲ್ ಮತ್ತು ಐಸ್ ಹಾಕಿ, ಬೇಸ್ ಬಾಲ್, ಅಥ್ಲೆಟಿಕ್ಸ್, ಚಳಿಗಾಲದ ಕ್ರೀಡೆ ಮತ್ತು ಜಲಕ್ರೀಡೆ ಇವು ಕೆನಡದ ರಾಷ್ಟ್ರೀಯ ಕ್ರೀಡೆಗಳು.
ಕೆನಡಿಯನ್ ಡಾಲರ್ ಇಲ್ಲಿಯ ನಾಣ್ಯ. ಇದನ್ನು 100 ಸೆಂಟುಗಳಾಗಿ ವಿಭಾಗಿಸಲಾಗಿದೆ.       (ವಿ.ಜಿ.ಕೆ.)

 
ಕೆನಡದ ಪ್ರಾಂತ್ಯಗಳು ಮತ್ತು ಪ್ರದೇಶಗಳು

ಪ್ರಾಂತ್ಯಗಳು ಮತ್ತು 
ಪ್ರದೇಶಗಳು
ವಿಸ್ತೀರ್ಣ
ಚ.ಮೈ
ಜನಸಂಖ್ಯೆ
(1966)
 
 ರಾಜಧಾನಿ

ಪ್ರಾಂತ್ಯಗಳು
ಆಲ್ಬರ್ಟ್
ಬ್ರಿಟಿಷ್ ಕೊಲಂಬಿಯ
ಮ್ಯಾನಿಟೋಬ
ನ್ಯೂ ಬ್ರನ್‍ಸ್óವಿಕ್
ನೋವ ಫೌಂಡ್‍ಲೆಂಡ್
ನೋವ ಸ್ಕೋಷ
ಆಂಟೇರಿಯೋ
ಪ್ರಿನ್ಸ್ ಎಡ್ವರ್ಡ್ ದ್ವೀಪ
ಕ್ವಿಬೆಕ್
ಸ್ಯಾಸ್ಕ್ಯಾಚೆವನ್ ಪ್ರದೇಶಗಳು
ಯೂಕಾನ್ ಪ್ರದೇಶ
ವಾಯುವ್ಯ ಪ್ರದೇಶ

2,55,285
3,66,255
2,51,000
28,359
1,56,185
21,425
4,12,582
2,184
5,94,860
51,700
2,07,076
13,04,903

14,63,203
18,73,674
 9,63,066
 6,16,788
 4,93,396
 7,56,039
69,60,870
1,08,535
57,80,845
9,55,344 
14,382
28,738

ಎಡ್ಮಂಟನ್
ವಿಕ್ಟೋರಿಯ
ವಿನಿಪೆಗ್
ಫ್ರೆಡರಿಕ್ಟನ್
ಸೇಂಟ್‍ಜಾನ್‍ಸ್ó
ಹ್ಯಾಲಿಫ್ಯಾಕ್ಸ್
ಟರಾಂಟೋ
ಷಾರ್ಲಟ್‍ಟೌನ್
ಕ್ವಿಬೆಕ್
ರೆಜೈóನ
ಹ್ವೈಟ್‍ಹಾರ್ಸ್
ಎಲ್ಲೊನೈಫ್

 
         ಕೆನಡದ ಮುಖ್ಯ ನಗರಗಳು ಮತ್ತು ಅವುಗಳ ಜನಸಂಖ್ಯೆ (1966)

ಆಟ್ಟವ (ರಾಜಧಾನಿ)    	..  4,94,535
ಮಾಂಟ್ರಿಯಾಲ್       	.. 24,36,817
ಟರಾಂಟೋ          	.. 21,58,496
ವ್ಯಾಂಕೂವರ್         	..  8,92,286
ವಿನಿಪೆಗ್           	..  5,08,759
ಹ್ಯಾಮಿಲ್ಟನ್        	..  4,49,116
ಕ್ವಿಬೆಕ್            	..  4,13,396
ಎಡ್ಮಂಟನ್        	..  4,01,299
ಕ್ಯಾಲ್‍ಗರಿ         	..  3,30,575
ವಿಂಡ್‍ಸರ್        	..  2,11,697
ಹ್ಯಾಲಿಫಾಕ್ಸ್        	..  2,07,396
ಕಿಚನರ್         	..  1,98,193
ಲಂಡನ್         	..  1,92,275				

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ